Sunday 8 September 2013

ಬೆಟ್ಟದಜೀವ

 ಕರ್ತೃ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ  ಶಿವರಾಮ ಕಾರಂತ್

   
         ನಾನು ಹೈಸ್ಕೂಲು  ಓದುತ್ತಿರಬೇಕಾದರೆ ವಾರಕ್ಕೊಮ್ಮೆ ಲೈಬ್ರರಿಯಿಂದ ಪುಸ್ತಕಗಳನ್ನು ಪಠ್ಯಪೂರಕ ಚಟುವಟಿಕೆ ಎಂದು  ಓದಲು ನೀಡುತ್ತಿದ್ದರು . ನನಗೆ ಸಿಕ್ಕ ಮೊದಲ ಪುಸ್ತಕವೇ ' ಬೆಟ್ಟದಜೀವ ' -ಒಂದು ಕಾದಂಬರಿ ... ಇದರ ಕರ್ತೃ ಕಾರಂತರು ನಮ್ಮ ಜಿಲ್ಲೆಯವರೇ , ಮೂಕಜ್ಜಿಯ ಕನಸುಗಳು , ಮರಳಿ ಮಣ್ಣಿಗೆ,ಚೋಮನ ದುಡಿ ಯಂತಹ ಕೃತಿಗಳನ್ನು ರಚಿಸಿದ್ದು ಇವುಗಳ ಮೇಲೆ ಚಲನಚಿತ್ರಗಳು ಬಂದಿದ್ದು ಹಲವರು ಪ್ರಶಸ್ತಿಗಳನ್ನು ಬಾಚಿವೆ ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ,ಮಕ್ಕಳಿಗಾಗಿ ಬಾಲವನ ಸ್ಥಾಪಿಸಿದ್ದಾರೆ . ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ, ಪಂಪಪ್ರಶಸ್ತಿ ಮುಂತಾದ ಹಲವು ಹತ್ತು ಪ್ರಶಸ್ತಿ ಪುನಸ್ಕಾರಗಳನ್ನು ಪಡೆದ ಇಂತಹ ಮಹಾನ್  ಕವಿ ಪ್ರಕೃತಿಯನ್ನು  ತಮ್ಮ ಬರಹಗಳಲ್ಲಿ ಸೊಗಸಾಗಿ  ಮೂಡಿಸಿದ್ದುದು ನನಗೆ ತಿಳಿದಿತ್ತು .  ಹಾಗಾಗಿ ನಾನು ಮುಖಪುಟದಿಂದಲೇ ಬಲು ಆಸಕ್ತಿಯಿಂದ ಓದತೊಡಗಿದೆ ....
         ಕಾರಂತರು  ಸ್ವತಃ ಒಂದು  ಪಾತ್ರವಾಗಿ  ಈ  ಕಾದಂಬರಿಯಲ್ಲಿ ನಿರ್ವಹಿಸಿದ ಬಗೆ ನಿಜವಾಗ್ಲೂ ಓದುಗರನ್ನು ಅರೆಕ್ಷಣ ಬಿಡದಂತೆ ಓಡಿಸಿಕೊಂಡು ಹೋಗುತ್ತವೆ .....  ಗೋಪಾಲಯ್ಯ , ಶಂಕರಮ್ಮ, ಲಕ್ಷ್ಮೀ ,ಬಟ್ಯ , ಮುಂತಾದ ಪಾತ್ರಗಳೂ ಕಾದಂಬರಿಯಲ್ಲಿ ಜೀವಂತಿಕೆಯನ್ನು ಹೊತ್ತೇ ನಡೆದಾಡುತ್ತವೆ .... ಪಶ್ಚಿಮ ಘಟ್ಟ ತಪ್ಪಲಿನ  ಸುಂದರವಾದ ಹಸಿರು ಭೂಮಿಯಲ್ಲಿ ಕಡೆಯ ಪುಟದವರೆಗೂ ತೋಯಿಸುತ್ತ , ಗೋಪಾಲಯ್ಯನ ಜೀವನಗಾಥೆಯ ಮೇಲೆ ಬೆಳಕು ಚೆಲ್ಲಿ ಆತನ ನೋವನ್ನು ತನ್ನ ನೋವೆಂದು ಭಾವಿಸಿ ಲೀನವಾಗುವ ಅದ್ಭುತ ಕ್ರಿಯಾಶೀಲ ಕಥನ ಈ ಕಾದಂಬರಿ.....
         ತನ್ನ ಕಳೆದು ಹೋದ ದನವನ್ನು ಹುಡುಕುತ್ತ ಹೊರಟ ಲೇಖಕರು ದಾರಿ ತಪ್ಪಿ ಬೇರಾವುದೋ ಊರ ಕಡೆ ಬಂದಿರುತ್ತಾರೆ. ಹೀಗೆ ಊರವರ ಸಹಾಯದಿಂದ ಗೋಪಾಲಯ್ಯನ ಮನೆ ತಲುಪುವರು . ಅಂದು ರಾತ್ರಿ ಅವರಲ್ಲಿ ಉಳಕೊಂಡು ಮರುದಿನ ಹೊರಡಬೇಕು ಎಂದೆಣಿಸಿದ ಅವರಿಗೆ ಆ ವೃದ್ಧ ದಂಪತಿ ತಮ್ಮ ಮನೆಗೆ ಅತಿಥಿಗಳು ಬರುವುದು ವಿರಳ, ನಾಲ್ಕಾರು ದಿನ ಇದ್ದು ಹೋಗುವಂತೆ ವಿನಂತಿಸುತ್ತಾರೆ.. ಅವರ ಆ ಪ್ರೀತಿ , ನಿರ್ಮಲ ಮನಸ್ಸು,ಉಪಚಾರ , ಎಲ್ಲಕ್ಕೂ ಮನ ಸೋತಿದ್ದ ಲೇಖಕರು ಇದಕ್ಕೆ ಸಮ್ಮತಿಸುತ್ತಾರೆ. ಹೀಗೆ ಅವರು ಅಲ್ಲಿನ ಆಚಾರ -ವಿಚಾರ , ಸಮೃದ್ಧ ಜೀವನ , ಕೃಷಿ ಗಾಗಿ ಕಷ್ಟಪಟ್ಟ ಬದುಕು, ಬೇಟೆ , ಆನೆ ದಾಳಿ , ಭತ್ತದ ಗದ್ದೆ , ಮಲೆನಾಡಿನ ಎಣ್ಣೆಸ್ನಾನ , ಹೊಳೆಸ್ನಾನ , ಜಾರುವ ಕಾಲುದಾರಿ, ಅಲ್ಲಿನ ಕೆಲಸದಾಳುಗಳ ಜೀವನಕಥೆ, ಮಗನು ಆಗಲಿದ ನೋವು, ಮತ್ತೆ ಬರುವನು ಎಂಬ ಆಸೆ.... ಎಲ್ಲವನ್ನು ಅನುಭವಿಸುತ್ತ ಅದರ ನೇರ ಅನುಭವವನ್ನು ಸರಳ ಭಾಷೆಯ ಮೂಲಕ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.  ಪ್ರತಿ ಬಾರಿ ಈ  ಕಾದಂಬರಿ ಓದುವಾಗಲೂ ಆ ಪಾ ತ್ರಗಳೆಲ್ಲ ಜೀವಂತವಾಗಿ ನನ್ನೆದು ಮಾತಾಡುತ್ತಿವೆ, ಆ ಹಸಿರಿನ ಕಾಡು , ಗದ್ದೆ ಎಲ್ಲ ನನ್ನೆದುರು ನಟಿಸುತ್ತವೆ. ಜೀವನಕ್ಕೆ ಅತಿ ಹತ್ತಿರವಾಗಿ ಕಥೆ . ಒಮ್ಮೆ ಓದಕುಳಿತರೆ ಕಡೆ ಕ್ಷಣದವರೆಗೂ ಓಡಿಸಿಕೊಂಡೇ  ಹೊಗುತ್ತದೆ.. ಮನಸಿಗೆ ನಾಟುತ್ತದೆ, ಕಾದಂಬರಿ ಮುಗಿದೇ ಹೋಯಿತು ಅನಿಸುತ್ತೆ ... ಆ ಮುದಿ  ಜೀವಗಳಂತೆ  ಕಡೆಯ ದಿನಗಳಲ್ಲಾದರೂ ಮಗನು ಮನೆಗೆ ಬರಲಿ  ಎಂದು ಜೀವ  ಹಾರೈಸುತ್ತದೆ ...
           ಕಾದಂಬರಿ ಓದಿ ಮಡಚಿಟ್ಟರೂ ಅವರರೋ ನಮ್ಮಬಂಧುಗಳು  ಅವರಿಗೆ ಹೀಗಾಯ್ತಲ್ಲ ಛೆ! ಅಂದುಬಿಡ್ತೇವೆ . ಕಾದಂಬರಿ ಓದಿದ ಮರುದಿವಸಗಳೆಲ್ಲ ಅದೇ ಗುಂಗಿನಲ್ಲಿ ಇರುವುದರಿಂದ  ಬೇರೆ ಯಾವ ಮಾತೂ ಅನಗತ್ಯವಾಗಿ ತೋರುತ್ತದೆ ,ಕರ್ತೃ&ಕೃತಿಯ  ಸ್ಥಾನವನ್ನು, ಅದು ನಮ್ಮ ಮೇಲೆ  ಬೀರುವ ಪರಿಣಾಮವನ್ನೂ ನಮಗರಿವಿಲ್ಲದಂತೆ  ನಿರ್ಧರಿಸಿಬಿಡುತ್ತದೆ ........ ಆಮೇಲೆ ನಾವು ನಮ್ಮ ಅಕ್ಕಪಕ್ಕದಲ್ಲಿ ಇಂತಹ ಇನ್ನೊಂದು ಕಥೆ ಇದೆ ಎಂದು ತಡಕಾಡುವುದು ಖಂಡಿತ . ಅಲ್ಲವೇ?

(  ಕಾರಂತರಂತಹ ದೊಡ್ಡ ವ್ಯಕ್ತಿಯ  ಬಗ್ಗೆ ಬರೆಯಲು ಹೇಳಲು ನಾನಿನ್ನೂ  ಚಿಕ್ಕವಳು. ಖ್ಯಾತ ಕೃತಿಯ ಬಗ್ಗೆ ನನಗನಿಸಿದ್ದನ್ನು ಬರೆದೆ.... ನಿಮಗನಿಸಿದ್ದನ್ನು ಪ್ರತಿಕ್ರಿಯಿಸಿ  )
                                                                                                                -ಕಾವ್ಯಮಯಿ